ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಹೊಸ ವಿವಾದದಲ್ಲಿ – ‘ಸರ್ಕಾರಿ ಶಾಲೆ H8’ ಚಿತ್ರತಂಡದ ಗಂಭೀರ ಆರೋಪ!
ಬಿಗ್ ಬಾಸ್ ಮೂಲಕ ಹೆಸರು ಮಾಡಿರುವ ಗಿಲ್ಲಿ ನಟ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೊಸ ಸಿನಿಮಾ ‘ಸರ್ಕಾರಿ ಶಾಲೆ H8’ ಸಂಬಂಧ ಚಿತ್ರ ನಿರ್ಮಾಪಕರು ಫಿಲಂ ಚೇಂಬರ್ಗೆ ಅಧಿಕೃತವಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ. ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡಿದ್ದರೂ ಗಿಲ್ಲಿ ಪ್ರಮೋಷನ್ನಲ್ಲಿ ಭಾಗವಹಿಸಿಲ್ಲ ಎಂಬುದು ಪ್ರಮುಖ ಆರೋಪವಾಗಿದೆ.
ನಿರ್ಮಾಪಕರ ಹೇಳಿಕೆಯ ಪ್ರಕಾರ, ಗಿಲ್ಲಿ ಕೇಳಿದಷ್ಟು ಸಂಭಾವನೆ ನೀಡಿ ಸಿನಿಮಾದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಸಿನಿಮಾ ರಿಲೀಸ್ ಸಮಯದಲ್ಲಿ ಪ್ರಮೋಷನ್ಗೆ ಹಾಜರಾಗಿಲ್ಲ, ಕಾಲ್ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಸೋಷಿಯಲ್ ಮೀಡಿಯಾದಲ್ಲಿಯೂ ಯಾವುದೇ ಪೋಸ್ಟ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸರ್ಕಾರಿ ಶಾಲೆ H8’ ಸಿನಿಮಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಜಾನರ್ಗೆ ಸೇರಿದ್ದು, ಫೆಬ್ರವರಿ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬಿಗ್ ಬಾಸ್ ನಂತರ ಗಿಲ್ಲಿ ನಟ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಈ ಚಿತ್ರಕ್ಕೆ ಗುಣ ಹರಿಯಬ್ಬೆ ಅವರು ಕಥೆ–ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತೇಜಸ್ವಿನಿ ಎಸ್ ಅವರು ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಗಿಲ್ಲಿ ಜೊತೆಗೆ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್ ಸೇರಿದಂತೆ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್ ಮತ್ತು ನಮ್ರತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ವಿವಾದದ ನಡುವೆ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಗಿಲ್ಲಿ ನಟರಿಂದ ಪ್ರತಿಕ್ರಿಯೆ ಬರಬಹುದೇ ಎಂಬುದು ಎಲ್ಲರ ಗಮನ ಸೆಳೆದಿದೆ.